ದೇಶ, ಕಾಲ ಹಾಗೂ ಅನಂತ: ಭಾಗ ೨: ವಿಜ್ಞಾನದ ದೃಷ್ಟಿಕೋಣ: ೨೦ನೆ ಶತಮಾನಕ್ಕಿಂತ ಮೊದಲು

ಈ ಬರಹದ ಭಾಗ-1 ಇಲ್ಲಿ ಓದಿ.

sky space milky way stars

Photo by Miriam Espacio on Pexels.com

***

೧೯೦೫ ರ ಮೊದಲು, ನಮ್ಮ ಜಗತ್ತಿನ ದೃಷ್ಟಿಕೋಣ ಗೆಲಿಲಿಯೊ ಹಾಗೂ ನ್ಯೂಟನ್ ಎಂಬ ವಿಜ್ಞಾನಿಗಳ ಸಿದ್ಧಾಂತಗಳ ಮೇಲೆ ಆಧಾರವಾಗಿತ್ತು. ನ್ಯೂಟನ್ನಿನ ಸಿಧ್ಧಾಂತದ ಪ್ರಕಾರ, ಯಾವುದೇ ಒಂದು ವಸ್ತು ಚಲನ ಸ್ಥಿತಿಯಲ್ಲಿದಿಯೋ ಅಥವಾ ಅಚಲನ ಸ್ಥಿತಿಯಲ್ಲಿದಿಯೋ ಎಂದು ಹೇಳಲು ಸಾಧ್ಯವೇ ಇಲ್ಲ (ನ್ಯೂಟನ್ನಿನ ಚಲನೆಯ ಪ್ರಥಮ ತತ್ವ/ನಿಯಮ: Newton’s First law of Motion). ಆದರ ಸ್ಥಿತಿಯನ್ನು ಹೇಳಲು ಇನ್ನೊಂದು ವಸ್ತುವಿಗೆ ಹೋಲಿಸಿ ಮಾತ್ರ ಹೇಳಬಹುದು. 

ಉದಾಹರಣೆಗೆ, ರೈಲಿನಲ್ಲಿ ಕುಳಿತಿರುವ ವ್ಯಕ್ತಿಗೆ ಹೊರಗಿನ ವಸ್ತುಗಳು ಚಲಿಸುತ್ತಿರುವಂತೆ ಕಂಡರೆ, ಹೊರಗೆ ನಿಂತಿರುವ ವ್ಯಕ್ತಿಗೆ ರೈಲು ಚಲಿಸುತ್ತಿರುವಂತೆ ಕಾಣುತ್ತದೆ. ನ್ಯೂಟನ್ನಿನ ಸಿದ್ಧಾಂತದ ಪ್ರಕಾರ ಇವರಿಬ್ಬರಲ್ಲಿ, ಯಾರು ನಿಜವಾಗಿ ಚಲಿಸುತ್ತಿದ್ದಾರೆ ಎಂದು ಹೇಳಲು ಸಾಧ್ಯವೇ ಇಲ್ಲ!!! ಅಂದರೆ, ಚಲನೆ ಎನ್ನುವುದು ಹೋಲಿಕೆ ಇಂದ ಮಾತ್ರ ಹೇಳಲು ಸಾಧ್ಯ. ಸುತ್ತ ಮುತ್ತಲು ಹೋಲಿಸಲು ಬೇರೆ ವಸ್ತುಗಳಿಲ್ಲದಿದ್ದರೆ, ನಾವು ಚಲಿಸುತ್ತಿದ್ದೇವೆಯೋ ಅಥವಾ ಇಲ್ಲವೋ ಎಂದು ತಿಳಿಯಲು ಸಾಧ್ಯವೇ ಇಲ್ಲ.  ಇದನ್ನು ‘motion is relative’ ಎಂದು ಇಂಗ್ಲಿಶ್-ನಲ್ಲಿ ಹೇಳುತ್ತಾರೆ.

ಈ ತತ್ತ್ವದ ಒಂದು ವಿಚಿತ್ರ ಪರಿಣಾಮವನ್ನು ಒಂದು ಉದಾಹರಣೆಯ ಮೂಲಕ ಯೋಚಿಸೋಣ. ಒಂದು ಚಲಿಸುವ ರೈಲು, ಪ್ಲಾಟ್ಫಫಾರ್ಮ್ ದಾಟಿ ಹೋದ ಸಂದರ್ಭ ಇರಲಿ. ಆ ರೈಲಿನಲ್ಲಿ ಇರುವ ಮಗು ಚೆಂಡನ್ನು ಮೇಲಕ್ಕೆ ಎಸೆದರೆ, ಆ ಮಗುವಿನ ಪ್ರಕಾರ ಅವನು ಎಲ್ಲಿಂದ ಎಸೆದನೋ, ಅಲ್ಲೇ ವಾಪಸ್ ಬಂದು ಬೀಳುತ್ತದೆ. ಆದರೆ, ಹೊರಗೆ ಪ್ಲಾಟ್ಫಫಾರ್ಮ್-ನಲ್ಲಿ ನಿಂತಿರುವ ಪ್ರೇಕ್ಷಕನ ಪ್ರಕಾರ, ಅದೇ ಚೆಂಡು ಸುಮಾರು ದೂರ ಮುಂದೆ ಹೋಗಿ ಬೀಳುತ್ತದೆ; ಯಾಕೆಂದರೆ ಅಷ್ಟು ಹೊತ್ತಿಗೆ ರೈಲು ಸಹ ಮುಂದೆ ಚಲಿಸಿರುತ್ತದೆ.  ಅಂದರೆ, ಮಗುವಿನ ಪ್ರಕಾರ ಚೆಂಡಿನ ಮಾರ್ಗವೇ ಒಂದಾದರೆ, ಹೊರಗೆ ನಿಂತಿದ್ದ ಪ್ರೇಕ್ಷಕನಿಗೆ ಕಂಡ ಚೆಂಡಿನ ಮಾರ್ಗವೇ ಬೇರೆ. ಅಂದರೆ, ಒಂದೇ ಘಟನೆಯ ವಿವರಣೆ ಅದನ್ನು ನೋಡಿದ ವ್ಯಕ್ತಿಯ ಚಲನೆಯ ಸ್ಥಿತಿಯ ಮೇಲೆ ಅವಲಂಬಿಸಿದೆ. 

ಇದರ ಒಟ್ಟು ಅಭಿಪ್ರಾಯವೆಂದರೆ, ಆಕಾಶವನ್ನು ನಿರಪೇಕ್ಷವಾಗಿ ಅಳತೆ ಮಾಡಲು ಸಾಧ್ಯವಿಲ್ಲ (Lack of Absolute Space). ಇದು ಪ್ರೇಕ್ಷಕ ಹಾಗೂ ಪ್ರೇಕ್ಷಕ ಗಮನಿಸುವ ವಸ್ತುವಿನ ನಡುವಿನ ಸಾಪೇಕ್ಷ್ಯ ವೇಗದ (ಹೋಲಿಗೆ ವೇಗ; relative speed) ಮೇಲೆ ಅವಲಂಬಿತವಾಗಿರುತ್ತದೆ. [ಈ ವಿಷಯ ಸ್ವಲ್ಪ ಕಠಿಣವಾದದ್ದು. ಈ ವಿಷಯವನ್ನು ಅರ್ಥಮಾಡಿಕೊಳ್ಳಲು ಸುಮಾರು ವರ್ಷಗಳೇ ಹಿಡಿಯಬಹುದು! ಇದನ್ನು ಬಿಟ್ಟು ಮುಂದೆ ಓದಿದರೆ ಏನೂ ತೊಂದರೆಯಿಲ್ಲ.]

ದೇಶ/ಆಕಾಶ, ಕಾಲ ಹಾಗೂ ವಿಶ್ವ – ಇವು ನಿಕಟವಾಗಿ ಸಂಬಂಧವುಳ್ಳ ವಿಚಾರಗಳು. ಯಾವುದೇ ಘಟನೆಯನ್ನು ತಿಳಿಸಲು, ಅದು ನಡೆದ ದೇಶ ಹಾಗು ಕಾಲಗಳನ್ನು ಸೂಚಿಸಿದರೆ ಸಾಕು. ದೇಶ/ಆಕಾಶವನ್ನು ನಿರಪೇಕ್ಷವಾಗಿ (absolute) ಸೂಚಿಸಲು ಸಾಧ್ಯವಿಲ್ಲದೆ ಇದ್ದರೂ, ಸಮಯ(ಕಾಲ)ವನ್ನು – ಅಂದರೆ ಎರಡು ಘಟನೆಗಳ ನಡುವೆ – ನಿರ್ದಿಷ್ಟವಾಗಿ, ನಿರಪೇಕ್ಷ್ಯವಾಗಿ ಸೂಚಿಸಬಹುದು ಎಂಬುದು ನ್ಯೂಟನ್ನಿನ ವಾದವಾಗಿತ್ತು. 

ಅಂದರೆ, ಯಾವುದೇ ಇಬ್ಬರು ವ್ಯಕ್ತಿಗಳು ಎರಡು ಘಟನೆಗಳ ನಡುವೆ ಸಮಯ ಎಷ್ಟು ಹಿಡಿಯಿತು ಎಂಬ ವಿಷಯದಲ್ಲಿ ಸಮ್ಮತಿಯಲ್ಲಿರುತ್ತಾರೆ. ಇದು, ಆ ಘಟನೆ ನಡೆದ ಸ್ಠಳದ ಮತ್ತು ಚಲನೆಯ ಬಗ್ಗೆ ವಿವಾದವಿದ್ದರೂ ಸಹ ಅದರ ಕಾಲದ ಬಗ್ಗೆ ಸಂಶಯವಿರುವುದಿಲ್ಲ. (ಸಮಯವನ್ನು ಅಳತೆ ಮಾಡಿದ ಇಬ್ಬರು ವ್ಯಕ್ತಿಗಳು ಸಮಯ ಅಳತೆ ಮಾಡಬಲ್ಲಷ್ಟು ಬುದ್ಧಿವಂತರು ಹಾಗೂ ಅವರಿಬ್ಬರ ಹತ್ತಿರ ನಿಖರವಾಗಿ ಯಾವುದೇ ತಪ್ಪಿಲ್ಲದೇ ನಡೆಯುವ ಗಡಿಯಾರಗಳು ಇದೆ ಎಂಬುದು ನಮ್ಮ ನಂಬಿಕೆ!). ಅದಲ್ಲದೇ, ಕಾಲಕ್ಕೂ ಹಾಗೂ ಆಕಾಶಕ್ಕೂ ಯಾವುದೇ ರೀತಿಯ ಸಂಭಂದ ಇಲ್ಲ ಎನ್ನುವುದು ನ್ಯೂಟನ್ನಿನ ನಂಬಿಕೆಯಾಗಿತ್ತು. ಬಹುಶಃ ನಮ್ಮ ಸಾಮಾನ್ಯ ಅನುಭವವೂ ಇದೇ ಎಂದು ಹೇಳಬಹುದು.

***

 ನಾವಿರುವ ಈ ವಿಶ್ವದಲ್ಲಿ ದೇಶ ಹಾಗು ಕಾಲಗಳ ಮಿತಿ ಏನು? ನಮ್ಮ ವಿಶ್ವದ ‘ತುದಿ’ ಎಲ್ಲಿದೆ? ನಮ್ಮ ವಿಶ್ವದ ಸೃಷ್ಟಿ ಯಾವಾಗ ಆಯಿತು? ನಮಗೆ ಆಕಾಶದಲ್ಲಿ ಕಾಣುವ ನಕ್ಷತ್ರಗಲನ್ನೆಲ್ಲಾ ದಾಟಿ ದಾಟಿ ಹೋಗುತ್ತಿದ್ದರೆ ಎಷ್ಟು ದೂರದವರೆಗೆ ಕ್ರಮಿಸಬಹುದು? 

ಹೀಗೆ ಹತ್ತು ಹಲವಾರು ಪ್ರಶ್ನೆಗಳು ಸಾಮನ್ಯ ಮನುಷ್ಯನಿಗೆ ಕಾಡುವಂತೆ ವಿಜ್ಞಾನಿಗಳನ್ನು ಸಹ ನೂರಾರು ವರ್ಶಗಳಿಂದ ಕಾಡಿದೆ. ಇಂತಹ ಪ್ರಶ್ನೆಗಳ ಬಗ್ಗೆ ಯಾವುದೇ ಪ್ರಯೋಗಗಳನ್ನು ಮಾಡಿ ತಿಳಿಯಲು ಅಸಾಧ್ಯವಾದ ಕಾರಣ ಸಾಮಾನ್ಯವಾಗಿ ಇಂತಹ ಪ್ರಶ್ನೆಗಳಿಗೆ ಹೆಚ್ಚು ಪ್ರಾಧಾನ್ಯತೆ ಕೊಟ್ಟಿರಲಿಲ್ಲ. ೨೦ನೇ ಶತಮಾನದ ಪ್ರಾರಂಭದ ತನಕ ನಮ್ಮ ವಿಶ್ವ ಅನಂತ ವ್ಯಾಪ್ತಿ ಹೊಂದಿದೆ. ಅಲ್ಲದೇ, ನಮ್ಮ ವಿಶ್ವವು ‘ಅಚಲ’ ಸಮತೋಲನ ಸ್ಥಿತಿಯಲ್ಲಿದೆ [೧ ರಲ್ಲಿ ಸ್ವಲ್ಪ ವಿವರಣೆ ನೋಡಿ]. 

ಕಾಲಕ್ಕೆ (ಅಥವಾ ಸಮಯಕ್ಕೆ) ಮೊದಲಾಗಲಿ ಕೊನೆಯಾಗಲೀ ಇಲ್ಲ – ಎಂಬ ಅಭಿಪ್ರಾಯವು ವಿಜ್ಞಾನಿಗಳಲ್ಲಿ ಸರ್ವಸಮ್ಮತವಾಗಿತ್ತು. ನಮ್ಮ ವಿಶ್ವದ ಸೃಷ್ಟಿ ಇತ್ಯಾದಿ ಪ್ರಶ್ನೆಗಳು ಕೇವಲ ತತ್ತ್ವಶಾಸ್ತ್ರಗಳಿಗೆ (philosophy) ಸೀಮಿತವಾಗಿತ್ತು. 

೨೦ನೇ ಶತಮಾನದ ಮೊದಲ ಭಾಗದಲ್ಲಿ, ಈ ಎಲ್ಲಾ ದೃಷ್ಟಿಕೋಣಗಳು ಸಂಪೂರ್ಣ ಮಾರ್ಪಾಡು ಹೊಂದಿತು. ಅದಕ್ಕೆ ಕಾರಣ ಐನ್ ಸ್ಟೈನ್ (Einstein) ನ ಸಾಪೇಕ್ಷತಾವಾದ (Theory of Relativity) ಹಾಗೂ ಹಬಲ್ (Hubble) ಎಂಬ ವಿಜ್ಞಾನಿ ಕಂಡ ಆಧಾರಗಳಿಂದ  ರೂಪುಗೊಂಡ ಬಿಗ್ ಬ್ಯಾಂಗ್ ವಾದ (Big-bang Theory). 

[೧] ನಮಗೆ ತಿಳಿದಿರುವ ಹಾಗೆ ಭೂಮಿ ಮತ್ತು ಇತರ ಗ್ರಹಗಳು ಸೂರ್ಯನ ಸುತ್ತ ಹಾಗೂ ಚಂದ್ರ ಭೂಮಿಯ ಸುತ್ತ ಚಲನೆಯಲ್ಲಿದೆ. ಹೀಗೆ ತಿಳಿದಿದ್ದರೂ ಅಚಲ ಸ್ಥಿತಿಯಲ್ಲಿದೆ ಎಂದು ಹೇಗೆ ಹೇಳಲು ಸಾಧ್ಯ ಎಂದು ಕೇಳಬಹುದು. ಇಲ್ಲಿ ಒಟ್ಟಾರೆ ವಿಶ್ವದ ಬಗ್ಗೆ ಮಾತನಾಡುತ್ತಿರುವುದು. ಉದಾಹರಣೆಗೆ, ಪ್ಲಾಟ್-ಫ಼ಾರಂನಲ್ಲಿ ನಿಂತಿರುವ ರೈಲು ತೆಗೆದುಕೊಳ್ಳಿ. ಅದರಲ್ಲಿ ಪಯಣಿಸುತ್ತಿರುವ ಜನರು ತಮ್ಮ ಸ್ಥಳ ಬದಲಾಯಿಸುತ್ತಿದ್ದರೂ, ಒಂದು ಕಡೆಯಿಂದ ಮತ್ತೊಂದು ಕಡೆ ಓಡಾಡುತ್ತಿದ್ದರೂ, ರೈಲು ಅಚಲವಾಗಿದೆ ಎಂದು ಹೇಳುತ್ತೇವೆ. ಹಾಗೆಯೇ ಈ ಪ್ರಪಂಚ ನಿಂತ ರೈಲು ಇದ್ದ ಹಾಗೆ ಮತ್ತು ಭೂಮಿ ಮತ್ತಿತರ ಗ್ರಹಗಳು ಪಯಣಿಗರಿದ್ದಂತೆ. 

***

ಭಾಗ – ೩ ಮುಂದಿನ ಶನಿವಾರ ಪ್ರಕಟವಾಗಲಿದೆ.

One thought on “ದೇಶ, ಕಾಲ ಹಾಗೂ ಅನಂತ: ಭಾಗ ೨: ವಿಜ್ಞಾನದ ದೃಷ್ಟಿಕೋಣ: ೨೦ನೆ ಶತಮಾನಕ್ಕಿಂತ ಮೊದಲು

  1. Pingback: ದೇಶ, ಕಾಲ ಹಾಗೂ ಅನಂತ: ಭಾಗ ೧. ಪೀಠಿಕೆ – ಸಾಮಾನ್ಯ ಜ್ಞಾನ | Theoretical Ecology and Evolution Laboratory

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google photo

You are commenting using your Google account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s